
“ಮನಸ್ಸಿದ್ದಲ್ಲಿ ಮಾರ್ಗ”

ಉದಾಸೀನ ಬಿಟ್ಟವರಿಗೆ ಎಲ್ಲವೂ ಸಾಧ್ಯ. ಇಲ್ಲವೇ ಬರೀ ಕಾರಣ ಹುಡುಕುವುದಷ್ಟೇ ಬದುಕಿನ ಉದ್ದೇಶವಾಗುತ್ತದೆ. ಪ್ರಾತಃಕಾಲದಲ್ಲಿ ಬೇಗ ಎದ್ದೇಳುವುದು ತುಂಬಾ ಒಳ್ಳೆಯದು. ಸೂರ್ಯೋದಯ ಪೂರ್ವದ ಉಷಾ: ಕಾಲ ಅತ್ಯಂತ ಪ್ರಭಾವಶಾಲಿಯೂ, ಚೈತನ್ಯದಾಯಕವೂ ಆಗಿರುತ್ತದೆ. ಕಾರಣ ವಾತಾವರಣದಲ್ಲಿ ಆಗ ಓಜಸ್ಸು ತುಂಬಿರುವ ಶುದ್ಧ ಗಾಳಿ ಇರುವುದು. ಇದರ ನಿತ್ಯ ಸೇವನೆಯಿಂದ ವ್ಯಕ್ತಿಯು ಸಶಕ್ತನಾಗಿ ಮತ್ತು ಕ್ರಿಯಾಶೀಲನಾಗಿ ಬೆಳೆಯುವಲ್ಲಿ ಸಹಕರಿಸುತ್ತದೆ. ಪ್ರಾತಕಾಲದಲ್ಲಿ ಉದಾಸೀನ ಬಿಟ್ಟು ತಟಕ್ಕನೆ ಮೇಲೆದ್ದು ಅಂಗೈಗಳನ್ನು ಪರಸ್ಪರ ಉಜ್ಜಿಕೊಂಡು ಕಣ್ಣಿಗೆ ಮೃದುವಾಗಿ ಒತ್ತಿ, ದೀರ್ಘ ಉಚ್ಛ್ವಾಸ ನಿಚ್ಛ್ವಾಸ ಮಾಡುವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಹಿಂದಿನ ದಿನದ ಸಾಹಸದ ಸಾಧನೆಯ ಉನ್ನತ ವಿಚಾರಗಳನ್ನು ಒಮ್ಮೆ ನೆನವರಿಕೆ ಮಾಡಿಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ಸಿನ ಕಡೆಗೆ ಚಲಿಸುವುದನ್ನು ಚಿಂತಿಸಬೇಕು, ಪದೇ ಪದೇ ಮನಸ್ಸಿಗೆ ಮನನ ಮಾಡಿಕೊಳ್ಳಬೇಕು. ನಿತ್ಯ ಕರ್ಮಗಳನ್ನು ಮಾಡುತ್ತಾ ಭೂದೇವಿಯ ಪ್ರಾರ್ಥನೆಯನ್ನು ಜೊತೆಗೆ ಸೂಕ್ತ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಪೂಜೆ, ಧ್ಯಾನ ಇತ್ಯಾದಿಗಳನ್ನು ಅನುಸರಿಸಲು ಇದರಿಂದ ಮನಸ್ಸಿನಲ್ಲೂ, ಶರೀರದಲ್ಲೂ ಸಶಕ್ತತೆ -ಸದೃಢತೆ ವೃದ್ಧಿಯಾಗುತ್ತದೆ, ಮತ್ತು ಅದು ಬದುಕಿನ ಎಲ್ಲಾ ಸಮಸ್ಯೆಗಳಿಗೂ ಉತ್ತರ. ಇದು ಆಧ್ಯಾತ್ಮ ಸಂಪ್ರದಾಯಕ್ಕೆ ಮರೆಹೋಗುವುದೇ ಆಗಿದೆ. ಸರಳವಾಗಿ ಸುಲಭವಾಗಿ ಇವುಗಳನ್ನು ಗುರುವಿನ ಮೂಲಕ ಕಲಿಯುವುದು ಉತ್ತಮ. ಇಲ್ಲವೇ ಪರಂಪರೆಯಲ್ಲಿ ಅನುಸರಿಸಿಕೊಂಡು ಬಂದ ಹಿರಿಯರ ಅನುಭವಗಳು ಅತಿ ಚಿಕ್ಕ ವಯಸ್ಸಿನಿಂದಲೇ ನಮ್ಮಲ್ಲಿ ಪರಿಣಾಮಗಳನ್ನು ಬೀರುತ್ತವೆ. ಇದರಿಂದ ವ್ಯಕ್ತಿಗತವಾಗಿ ವಿಕಾಸ ಪಡೆಯಬಹುದು. ಶಾಲಾ ವಿದ್ಯಾಭ್ಯಾಸದ ಜೊತೆ ಹಿಂದೂ ಧರ್ಮದಲ್ಲಿ ಅನುಸರಿಸಬಹುದಾದ ಪರಂಪರಾಗತ ವಿಚಾರಗಳನ್ನು ಕಲಿಸುವ ಪರಿಪಾಠವು ಇತರ ಧರ್ಮಗಳಲ್ಲಿ ಇರುವಂತೆ ಇಂದು ನಮ್ಮಲ್ಲಿಲ್ಲ. ಇಲ್ಲಿ ಆಳಿ ಹೋದವರು ಸನಾತನ ಧರ್ಮದ ಬೆಂಬಲಕ್ಕೆ ಬಂದವರಿಲ್ಲ. ಹಿಂದುಗಳು ಇದರಿಂದ ಬಹುತೇಕವಾಗಿ ಆತ್ಮೋನ್ನತಿ, ಮಾನಸಿಕ ವಿಕಾಸದಲ್ಲಿ ಹಿಂದುಳಿದವರು. ಮಧ್ಯೆ ವಿದೇಶಿ ಸಂಸ್ಕೃತಿ, ಸಂಸ್ಕಾರಗಳ ಮಿಶ್ರಣಗಳು ಮಾಧ್ಯಮದ ಮೂಲಕ ಜನತೆಯನ್ನು ಚಿಕ್ಕ ವಯಸ್ಸಿಗೇ ದಾರಿ ತಪ್ಪಿಸುತ್ತವೆ.
ನಮ್ಮ ಸಂಸ್ಕೃತಿ, ಆಚಾರ ವಿಚಾರಗಳಿಗೆ ಮನಸೋತ ವಿದೇಶಿ ಮೂಲದವರು ಮನ ಪರಿವರ್ತನೆಗೊಂಡು ಹಿಂದೂ ಧರ್ಮವನ್ನು ಸ್ವ ಇಚ್ಛೆಯಿಂದ ಆಚರಿಸುವವರು, ಅನುಸರಿಸುವವರು ಇದ್ದಾರೆ! ಋಷಿ ಪರಂಪರೆಯಿಂದ ಪಡೆದ ಅಮೂಲ್ಯ ವಿಚಾರಗಳ ಪರಿಚಯವಿಲ್ಲದೆ ಅಪಥ್ಯ ಮಾಡುತ್ತಿದ್ದೇವೆ. ನಮ್ಮೆಲ್ಲ ದುರಂತಗಳಿಗೆ ಇದೊಂದು ಕಾರಣ. ನಮ್ಮೊಳಗೆ ಇರುವ ಸರ್ವಾಂತರ್ಯಾಮಿಯನ್ನು ಬಿಟ್ಟು ಅನಾಥ ಪ್ರಜ್ಞೆಯಿಂದ ಊರೆಲ್ಲಾ ಹುಡುಕುತ್ತಾ ಭ್ರಮನಿರಸನ ಪಡೆಯುತ್ತೇವೆ.
ಸಂಜೆಯ ಸಮಯ ಇದೇ ರೀತಿ ಸೂರ್ಯಾಸ್ತ ಕಾಲದಲ್ಲಿ ಸಂಧ್ಯಾವಂದನೆಗಳನ್ನು ಮಾಡಬಹುದು. ವಿದ್ಯಾರ್ಥಿಗಳು, ಸಮಯಾವಕಾಶವಿರುವ ಗ್ರಹಿಣಿಯರು, ತಮ್ಮ ಸಂತಾನದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಯೋಗ್ಯ ಪ್ರಜೆಗಳ ತಯಾರಿಯಲ್ಲಿ ನಾವು ಪ್ರಯತ್ನಿಸಬೇಕು. ನಮ್ಮ ಮನೆಯನ್ನು ನಾವು ಈ ರೀತಿ ಕಟ್ಟಿ ಬೆಳೆಸಿದರೆ ಲೋಕವು ತಂತಾನೆ ಪರಿವರ್ತನೆ ಯಾಗುವುದು. ಇದು ಸನಾತನ ಧರ್ಮಕ್ಕೆ ನಾವು ಕೊಡಬಹುದಾದ ಉತ್ತಮ ಕೊಡುಗೆ. ಹಾಗೇನೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ಅರ್ಪಿಸುವುದರಲ್ಲಿ ನಮ್ಮ ಜವಾಬ್ದಾರಿಯುತ ಸ್ಥಾನವನ್ನು ಉಪಯೋಗಿಸಿದಂತೆ. ನಾವು ಬದುಕಿನಲ್ಲಿ ಪಡೆಯಬಹುದಾದ ಉತ್ತಮಿಕೆಗಳನ್ನು ಭಗವಂತನಲ್ಲಿ ಅಹವಾಲುಗಳನ್ನು ಸಲ್ಲಿಸುತ್ತಾ ಪ್ರಾರ್ಥಿಸಬೇಕು. ಈ ರೀತಿಯ ಪ್ರಾರ್ಥನೆಯಿಂದ ನಮ್ಮೊಳಗೆ ತಾನಾಗಿ ಪರಿವರ್ತನೆ ಬರುತ್ತದೆ. ಶರೀರಕ್ಕೆ ನಾವು ಆಹಾರವನ್ನು ನಿತ್ಯವೂ ತಪ್ಪದೇ ನೀಡುತ್ತೇವೆ. ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿ ಮನೋಬಲ ವೃದ್ಧಿಯ ಸಾಧನಗಳು. ಇವು ಮನಸ್ಸಿಗೆ ಬಲ ನೀಡುವ ಆಹಾರಗಳು. ಇಲ್ಲಿ ಲೋಪ ಇಲ್ಲದಂತೆ ನಮ್ಮ ಕರ್ತವ್ಯಗಳನ್ನು ನಾವು ಪಾಲಿಸಬೇಕು ಹೀಗೆ ಮಾನಸಿಕವಾಗಿ ಸದೃಢವಾಗುವುದಕ್ಕೆ ಪ್ರತಿಯೊಬ್ಬನು ಪ್ರಯತ್ನಿಸಬೇಕು. ಮಕ್ಕಳಿಗೆ ಎಳವೆಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಬರುವಂತೆ ತಿಳುವಳಿಕೆ ಕೊಡಬೇಕು. ಭಗವಂತನಿಗೆ ವಿಜೃಂಭಣೆಯ ವೈಭವಪೂರಿತ ಪೂಜೆ ಬೇಕಾಗಿಲ್ಲ. ಸರಳ ರೀತಿಯಲ್ಲಿ ಮನಸ್ಸು ತುಂಬಿ ವ್ಯಾಕುಲ ಭಾವದಿಂದ ಅಂತ:ಕರಣ ಮೂಲಕ ಆತನನ್ನು ಮುಟ್ಟುವುದು ಸರ್ವಶ್ರೇಷ್ಟ ವಿಧಾನ.
ಧ್ಯಾನ ತರಗತಿಯಲ್ಲಿ ತಿಳಿ ಹೇಳುವ ಮಾನಸ ಪೂಜೆಗೆ ಹಾಜರಾಗಿ ಇದನ್ನು ತಿಳಿದುಕೊಳ್ಳಬಹುದು. ರಾತ್ರಿ ಮಲಗುವ ಮುನ್ನ ದಿನದ ಕಾರ್ಯ ಚಟುವಟಿಕೆಗಳನ್ನು ಮನವರಿಕೆ ಮಾಡಿಕೊಳ್ಳುವುದು ತನ್ನ ಸೋಲಿಗೆ ಕಾರಣಗಳನ್ನು ತಿಳಿಯುವುದು ಒಂದು ವಿಧಾನ. ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಗೆಲುವನ್ನು ನೆನೆಸಿ ಹೆಚ್ಚಿನ ಯಶಸ್ಸಿನ ಬಗ್ಗೆ ಚಿಂತಿಸುತ್ತ ಕಾರ್ಯವಿಧಾನಗಳನ್ನು ಮತ್ತೆ ಮತ್ತೆ ನೆನವರಿಕೆ ಮಾಡಿಕೊಳ್ಳುವುದು ನಮ್ಮ ಕಾರ್ಯಗಳನ್ನು ಲೋಪ ರಹಿತವಾಗಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ಈ ಸ್ಥಿತಿಯಲ್ಲಿನ ಚಿಂತನೆಯು ಪ್ರಜ್ಞೆಯಿಂದ ಸುಪ್ತಪ್ರಜ್ಞೆಗೆ ವರ್ಗಾವಣೆಯಾಗಿ ನಮ್ಮೊಳಗೆ ಪರಿವರ್ತನೆ ತಂತಾನೆ ನಿಧಾನವಾಗಿ ಬರುವುದು. ಇದು ಯಶಸ್ಸಿನ ಮುಂದಡಿ ಮತ್ತು ಮೆಟ್ಟಿಲುಗಳು.
ತುಳಸಿ ಗಿಡ ಒಂದು ಉತ್ತಮ ವನಸ್ಪತಿ ಸಸ್ಯ ಅತ್ಯಧಿಕ ಆಮ್ಲಜನಕವನ್ನು ರಾತ್ರಿ ಹಗಲನ್ನದೆ ವಾತಾವರಣಕ್ಕೆ ಬಿಡುಗಡೆ ಮಾಡುವುದು. ಮನೆಯ ಸುತ್ತಲೂ ಇವುಗಳನ್ನು ನೆಡುವುದರಿಂದ ಸೊಳ್ಳೆಯ ಕಾಟದಿಂದ ಪರಿಹಾರಗಳು ಲಬಿಸುತ್ತವೆ. ಒಂದು ಗಿಡ ನೆಟ್ಟು ನಿತ್ಯವೂ ನೀರುಣಿಸಿ ಒಂದು ಶ್ಲೋಕವನ್ನು ಹೇಳುವುದು ಸಂಪ್ರದಾಯ. ರಾತ್ರಿ ಸಮಯದಲ್ಲಿ ಒಂದು ದೀಪ ಉರಿಸಿಟ್ಟು ಕೈ ಮುಗಿಯುವುದು, ಪ್ರಾರ್ಥನೆ ಮಾಡುವುದು ಬಳಕೆಯಲ್ಲಿದೆ.
ಲೋಕ ಸಮಸ್ತ ಸುಖಿನೋ ಭವಂತು
About The Author
Discover more from Dhaksha Suddi
Subscribe to get the latest posts sent to your email.






